ಬೇತೋವನ್, ಲಡ್ವಿಗ್ ಫಾನ್	
1770-1827. ಜರ್ಮನಿಯ ಮಹಾ ಪ್ರತಿಭಾನ್ವಿತ ವಾದ್ಯವಾದಕ, ಕೃತಿಕಾರ ಮತ್ತು ಸಂಗೀತ ನಿರ್ಮಾಪಕ. ಪ್ರಪಂಚದ ಸಾರ್ವಕಾಲಿಕ ಶ್ರೇಷ್ಠ ಸಂಗೀತವಿದರ ಪೈಕಿ ಒಬ್ಬ. ಷೇಕ್‍ಸ್ಪಿಯರ್ ಹೇಗೆ ಮಾನವ ಮನಸ್ಸಿನ ಪ್ರತಿಯೊಂದು ರಾಗ ಭಾವವನ್ನೂ ತನ್ನ ನಾಟಕಗಳಲ್ಲಿ ಘನೀಭವಿಸಿ ಅದರ ಚಿರಂತನ ಮೌಲ್ಯವನ್ನು ಉಜ್ಜ್ವಲೀಕರಿಸಿದ್ದಾನೋ ಹಾಗೆ ಬೇತೋವನ್ ಮಾನವನ ಸಾಹಸ ಪ್ರಜ್ಞೆಯ ಹಾಗೂ ಕಲ್ಪನಾ ಸಾಮಥ್ರ್ಯದ ಹಿರಿಮೆಯನ್ನು ತನ್ನ ಕೃತಿಗಳಲ್ಲಿ ಸೆರೆಹಿಡಿದು ಅವುಗಳ ಉಜ್ಜ್ವಲ ಮುಖವನ್ನು ವೈಭವೀಕರಿಸಿದ್ದಾನೆ. ಅವನು ಕಾವ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೈ ಆಡಿಸಿ ಅವುಗಳಿಗೆ ಹಿರಿ ಅಂತಸ್ತು ನೀಡಿದರೆ ಇವನು ಸಂಗೀತದ ಎಲ್ಲ ಪ್ರಕಾರಗಳಲ್ಲಿಯೂ ಕೃತಿರಚಿಸಿ ಇವುಗಳಿಗೆ ಘನತೆ ತಂದುಕೊಟ್ಟಿದ್ದಾನೆ. ಇಬ್ಬರದೂ ಮೈದಾಸ್ (ಪರುಷ) ಸ್ವರ್ಶ-ಮುಟ್ಟಿದ್ದನ್ನು ಚಿನ್ನವಾಗಿಸುವ ಗುಣ. 

	ಸಂಗೀತದ ನಿಕಷ ಕರ್ಣ. ಆದರೆ ಬೇತೋವನ್ನನ ಶ್ರೇಷ್ಠ ಕೃತಿಗಳ ರಚನೆ ಆದದ್ದು ಅವನು ಪೂರ್ತಿ ಬಧಿರನಾದ ಮೇಲೇಯೇ, ಪರಮಭವ್ಯ ಸಂಗೀತವೊಂದು ಅದನ್ನು ಆಲಿಸಿ ಆನಂದಿಸಲಾಗದವನ ಕೊಡುಗೆ ಎಂದರೆ ತುಸು ವಿಚಿತ್ರವೆನ್ನಿಸೀತು. ಬೇತೋವನ್ನನ ಭೌತ ಶ್ರವಣೇಂದ್ರಿಯ ನಿಷ್ಕ್ರಿಯಾವಂತವಾದರೇನು ? ಅವನ ಅಂತರಿಕ ಸಂವೇದನೆಗಳು ಸದಾ ಜಾಗೃತವಾಗಿದ್ದ ಅತಕೋಮಲ ಮತ್ತು ಸುಕುಮಾರ ರಚನೆಗಳು ಅವನಿಂದ ನಿರಂತರವಾಗಿ ಪ್ರಕಟವಾಗುತ್ತಲೇ ಇದ್ದುವು. ಇದಕ್ಕಿಂತ ಹೆಚ್ಚಿನ ಇನ್ನೂ ಒಂದು ಮೌಲ್ಯವನ್ನು ಆತನ ಜೀವನ ಉದಾತ್ತೀಕರಿಸುತ್ತದೆ: ಅನಾರೋಗ್ಯ, ಬಡತನ, ಹತಾಶೆ, ಸೃಷ್ಟ್ಯಾತ್ಮಕ ಕ್ರಿಯೆ ಅಸಾಧ್ಯವೆಂದು ಭಾಸವಾಗುವ ಪರಿಸ್ಥಿತಿ ಮುಂತಾದ ಎಲ್ಲ ನಿಷೇಧಾತ್ಮಕ ಬಲಗಳನ್ನೂ ಮಾನವ ಪ್ರತಿಭೆ ಮೆಟ್ಟಿನಿಂತು ತನ್ನ ಅಸ್ತಿತ್ವವನ್ನು ಟಂಕಿಸಬಲ್ಲದು, ಪ್ರಗಲ್ಫ ಸುಂದರ ಸುಕುಮಾರ ಮತ್ತು ಉತ್ತಾರಕ ಕೃತಿಯನ್ನು ನೀಡಬಲ್ಲದು. 

ಪಶ್ಚಿಮ ಜರ್ಮನಿಯ ಬಾನ್ ನಗರದಲ್ಲಿ ಲಡ್ವಿಗ್ ಫಾನ್ ಬೇತೋವನ್ 1770 ಡಿಸೆಂಬರ್ 17ರಂದು ಜನಿಸಿದ. ಇವನದು ವೃತ್ತಿ ಸಂಗೀತಗಾರರ ಮನೆತನ. ಅಜ್ಜ (ಹಿರಿಯ) ಲಡ್ವಿಗ್ ಹೆಸರಾಂತ ಪಿಟೀಲುವಾದಕ ಮತ್ತು ಗಾಯಕ. ತಂದೆ ಯೋಹನ್ ಪಿಟೀಲು ವಾದಕ. ನಗರದ ವಾದ್ಯ ಮೇಳಗಳಲ್ಲಿ ಇವರಿಗೆ ಹುದ್ದೆ. ಯೋಹನ್ನನ ಹೆಂಡತಿ ಮೇರಿಯಾ. ಇವರದು ವಿಷಮ್ ವಿವಾಹ. ಗಂಡ ಕುಡುಕ ಮತ್ತು ಕಡು ಕೋಪಿಷ್ಠ, ದುಂದುಗಾರ, ಎಷ್ಟು ಹಣವಿದ್ದರೂ ಸಾಲದು. ಹೆಂಡತಿ ಸರಳೆ ಮತ್ತು ಸಂಕೋಚಶೀಲೆ, ಬಡತನದ ದಂದುಗದಲ್ಲಿಯೂ ಮನೆಯ ಐಕ್ಯ ಮತ್ತು ಓರಣ ಕಾಯ್ದುಕೊಂಡಿದ್ದ ಜಾಣೆ. ಇವರ ಮಗನೇ (ಕಿರಿಯ) ಲಡ್ವಿಗ್ ಫಾನ್ ಬೇತೋವನ್. ಇವನಿಗೆ ಮೂರು ವರ್ಷ ವಯಸ್ಸಾಗಿದ್ದಾಗ ಅಜ್ಜ (ಹಿರಿಯ) ಲಡ್ವಿಗ್ ತೀರಿಕೊಂಡ (1773). ತಂದೆ ಯೋಹನ್ನನಿಂದ ಮಗ ಲಡ್ವಿಗ್ಗನಿಗೆ ದೊರೆತದ್ದು ಸಂಗೀತ ಶಿಕ್ಷಣಕ್ಕಿಂತಲೂ ಹೆಚ್ಚಾಗಿ ದೈಹಿಕ ಶಿಕ್ಷೆ. ಉದ್ದೇಶ? ತನ್ನ ಎಳೆ ಅಣುಗ ಮಹಾಸಂಗೀತವಿದ ಆಗಬೇಕೆಂದು, ಆದರೆ ಅನುಸರಿಸಿದ ವಿಧಾನ ಸಂಗೀತದ ಬಗ್ಗೆ ಶಾಶ್ವತ ದ್ವೇಷ ತಿರಸ್ಕಾರ ಮೂಡುವಂತೆ.

	ವಾಸ್ತವವಾಗಿ ಬೇತೋವನ್ ಶಿಕ್ಷಣದಿಂದ ರೂಪುಗೊಂಡ ಸಾಚೆಸಿದ್ಧ (ಸ್ಟೀರಿಯೊಟೈಪ್ಡ್) ಕಲಾವಿದನಲ್ಲ. ಜನ್ಮತಃ ಪರಿಪೂರ್ಣವಾಗಿದ್ದ ಬಾಲಪ್ರತಿಭೆ. ನಾನೇನು ಪಡೆದಿರುವೆನೋ ಅದು ಪೂರ್ತಿ ನನ್ನದೇ-ಇದು ಮುಂದೊಂದು ದಿನ ಜಗತ್ಪ್ರಸಿದ್ಧ ಬೇತೋವನ್ ನುಡಿದ ಮಾತು. ಯೋಹನ್ನನಿಗೆ ತನ್ನ ಮಗನ ಸುಪ್ತ ಸಾಮಥ್ರ್ಯದ ಅರಿವು ಇತ್ತು. 1756ರಲ್ಲಿ ಜನಿಸಿ ಆ ವೇಳೆಗೆ ಖ್ಯಾತಿ ಶಿಖರವೈದಿದ್ದ ಆಸ್ಟ್ರಿಯಾದ ವೂಲ್ಫ್‍ಗಾಂಗ್ ಅಮೆಡ್ಯೂಸ್ ಮೊಝಾರ್ಟ್ (1756-91) ಎಂಬ ಸಂಗೀತವಿದನ ಆದರ್ಶ ಎದುರೇ ಇತ್ತು. ತನ್ನ ಮಗನೂ ಹೀಗಾಗಬೇಕೆಂದು ಯೋಹನ್ ಮನಸ್ಸಿನಲ್ಲಿ ಮಂಡಿಗೆ ಮೆದ್ದ. ಗತಕಾಲದ ಮೊಝಾರ್ಟ್ ಆಗಲು ವರ್ತಮಾನ ಯುಗದ ಯೆಹೂದಿ ಮೆನುಹಿನ್, ಮ್ಯಾಂಡೆಲಿನ್ ಯು. ಶ್ರೀನಿವಾಸ್ ಅಥವಾ ಗೋಟುವಾದ್ಯ ಎನ್. ರವಿಕಿರಣ್ ಆಗಲಿ ಈ ಎಲ್ಲ ಬಾಲಪ್ರತಿಭೆಗಳ ಅದ್ಭುತ ಯಶಸ್ಸಿನ ಹಿನ್ನೆಲೆ ಕತೆ ಬೇರೆಯೇ ಉಂಟು. ಆಯಾ ಕಲಾವಿದರ ತಂದೆ ತಾಯಿಯರು ತಮ್ಮ ವಶಕ್ಕೆ ಬಳುವಳಿಯಾಗಿ ಬಂದ ನಿಸರ್ಗದ ಅನಘ್ರ್ಯ ನಿಧಿಯನ್ನು ಜತನದಿಂದ ಕಾಪಾಡಿದರು; ಅದರ ಲಾಲನೆ ಪಾಲನೆಗೆ ಸಾಕಷ್ಟು ತ್ಯಾಗ ಮಾಡಿದರು; ನಿರ್ದಿಷ್ಟ ಗುರಿಯತ್ತ ನಡೆಯುತ್ತಿದ್ದಾಗ ಸವಾಲಾಗಿ ಬಂದ ಎಲ್ಲ ಕಷ್ಟಕೋಟಲೆಗಳನ್ನೂ ಯುದ್ಧವೀರನ ಮನೋಭಾವದಿಂದ ಎದುರಿಸಿ ಯಶಸ್ವಗಳಾದರು. ಈ ಬಾಲ ಕಲಾವಿದರೂ ಹಾಗೆಯೇ; ತಮ್ಮ ಹಿರಿಯರ ಬೆಂಬಲ, ಪ್ರೇರಣೆ ಮತ್ತು ಮಾರ್ಗದರ್ಶನ ಪಡೆದು ಹಿರಿ ಎತ್ತರ ಏರಿದರು. ತಂದೆ ಯೋಹನ್ ಮತ್ತು ಮಗ ಲಡ್ವಿಗ್ ಸಂಬಂಧ ಈ ಮೇಲಿನವರಂತಲ್ಲ. ಮೊಝಾರ್ಟ್‍ನ ತಂದೆ ಗಂಭೀರ ಪ್ರವೃತ್ತಿಯವ, ಜವಾಬ್ದಾರಿಕೆಯಿಂದ ತನ್ನ ಹೊಣೆ ನಿರ್ವಹಿಸಬಲ್ಲವ. ಯೋಹನ್ ಆದರೋ ಕಿರಿಕಿರಿ ಸ್ವಭಾವದವ. ತುಸುವೂ ಜವಾಬ್ದಾರಿಕೆ ವಹಿಸಲಾರದವ. ಮೊಝಾರ್ಟ್ ವಿಧೇಯ ಬಾಲಕ. ಬೆತೋವನ್ ಅಂತರ್ಮುಖಿ, ಶೀಘ್ರಕೋಪಿ, ಜನವಿದೂರ ಪ್ರವೃತ್ತಿಯವ. ಹೀಗಾಗಿ ಹಿಂಡು ಸೇರಲೊಪ್ಪದ ಈ ಬಾಲಪ್ರತಿಭೆ ತನ್ನ ಸ್ವಭಾವ ತೋರಿದ ಹಾದಿಯಲ್ಲಿ ಒಂಟಿಯಾಗಿಯೇ ಸಾಗುವುದು ಅನಿವಾರ್ಯವಾಯಿತು.

ಐದನೆಯ ವರ್ಷದಿಂದ ಇವನಿಗೆ ಪಿಯಾನೊ ಮತ್ತು ಪಿಟೀಲು ಶಿಕ್ಷಣ ಆರಂಭವಾಯಿತು. ತಂದೆಯೇ ಮೊದಲ ಗುರು. ಆದರೆ ಇಬ್ಬರದೂ ಸಾಂಪ್ರದಾಯಿಕವಾಗಿ ಯಾವುದನ್ನೂ ನಡೆಯಗೊಡದ ಸ್ವಭಾವ. ಮಗನಿಗೆ ವಯಸ್ಸು ಎಂಟಾಗಿದ್ದಾಗ (1778) ಇವನನ್ನು ರಂಗ ಪ್ರವೇಶಗೊಳಿಸಿ ಸಿಂಹಾಪಿಸಲು (ಲಯೊನೈಸ್) ಯೋಹನ್ ಪ್ರಯತ್ನಿಸಿದ. ಯಶಸ್ಸು ಗಳಿಸಲಿಲ್ಲ. ಏತನ್ಮಧ್ಯೆ ಬೇರೆ ಶಿಕ್ಷಕರ ಜೊತೆ ಪಾಠ ಮುಂದುವರಿಯಿತು: ಪಿಟೀಲು, ವಯೊಲಾ ಮತ್ತು ಪಿಯಾನೊ ವಾದ್ಯಗಳಲ್ಲಿ. ಈ ಪ್ರಚಂಡ ಪ್ರತಿಭೆಗೆ ಗುರು ನಿಮಿತ್ತ ಮಾತ್ರ. ಇವನೊಬ್ಬ ಸುಪ್ತ ಜ್ವಾಲಾಮುಖಿ. ಗುರುವಿನ ಮಾರ್ಗದರ್ಶನವಿರದಿದ್ದರೂ ಯುಕ್ತವೇಳೆಯಲ್ಲಿ ಚಿಪ್ಪೊಡೆದು ಸ್ವಂತ ಅಸ್ತಿತ್ವ ಸಾಧಿಸಬಲ್ಲ ಮಹಾ ಶಕ್ತಿ. ಮೊಝಾರ್ಟ್‍ನಂತೆ ಇವನೂ ತೀರ ಎಳೆವಯಸ್ಸಿನಲ್ಲೇ ಸಂಗೀತಕೃತಿ ರಚಿಸಿದ. ವಯಸ್ಸು ಕೇವಲ ನಾಲ್ಕು ಆಗಿದ್ದಾಗ ಮೂರು ಪಿಯಾನೊ ಸೊನಾಟಾಗಳನ್ನು ರೂಪಿಸಿದ್ದ. (ಎದ್ದು ಕಾಣುವ ಮೂರು ಅಥವಾ ನಾಲ್ಕು ಸಂಚಾರಗಳಲ್ಲಿ ಒಂದು ಅಥವಾ ಎರಡು ವಾದ್ಯಗಳಿಗಾಗಿ ರಚಿಸಿದ ಕೃತಿಯೇ ಸೊನಾಟಾ). ಸಾಂಪ್ರದಾಯಿಕ ಶಿಕ್ಷಣ ಇವನಿಗೆ ಅಪಥ್ಯ. ಶಾಲೆಯಲ್ಲಿ ಕಲಿತದ್ದು ಅತ್ಯಲ್ಪ-ಇತಾಲಿಯನ್ ಮತ್ತು ಲ್ಯಾಟಿನ್ ಭಾಷೆಗಳಲ್ಲಿ ಒಂದಿಷ್ಟು ಪ್ರವೇಶ ಮಾತ್ರ. ಸರೀಕರೊಡನೆ ಬೆರೆಯಲಾರ. ರೂಪ, ಗುಣ, ನಡತೆ, ಎಲ್ಲವೂ ಒರಟು. ಒಂಟಿ ಅಲೆತ, ಮೌನ ಅವಲೋಕನ ಪ್ರಿಯಹವ್ಯಾಸಗಳು. ಪ್ರಾಥಮಿಕ ದರ್ಜೆಗೇ ಶಿಕ್ಷಣ ಕೈದು, ಮುಂದೆ ಇವನನ್ನು ಪೂರ್ಣಕಾಲ ಸಂಗೀತಾಧ್ಯಯನಕ್ಕೇ ನಿಯೋಜಿಸಲಾಯಿತು (1779). ಈ ಸುಮಾರಿಗೆ ಇವನು ಆರ್ಗನ್ ವಾದ್ಯದಿಂದ ಆಕರ್ಷಿತನಾದ. (ಆರ್ಗನ್ ಅಥವಾ ಪೈಪ್ ಆರ್ಗನ್ ಎಂಬುದೊಂದು ಸುಷಿರವಾದ್ಯ-ನಮ್ಮ ಪುಂಗಿಯಂತೆ, ಇದರಲ್ಲಿ ಊದುಕೊಳವೆಗಳ ಒಂದು ಅಥವಾ ಹೆಚ್ಚು ಸಮುದಾಯ ಉಂಟು. ಸಂಘನಿತ ವಾಯುವಿನ ನೆರವಿನಿಂದ ನಾದ ಹೊಮ್ಮಿಸಿ ಕೀಲಿಮಣೆ ಮೇಲೆ ಬೆರಳಾಡಿಸಿ ಯುಕ್ತ ಸ್ವರಗಳನ್ನು ಉತ್ಪಾದಿಸುವುದು ಇಲ್ಲಿಯ ತಂತ್ರ. ಮೋಹಕ ಸ್ವರಗಳ ವ್ಯಾಪಕ ವೈವಿಧ್ಯ ಈ ವಾದ್ಯದ ವೈಶಿಷ್ಟ್ಯ. ಪ್ರಬುದ್ಧ ಬೇತೋವನ್ನನ ಮಾತಿನಲ್ಲಿ ಆರ್ಗನ್ ವಾದ್ಯ ಸಕಲ ವಾದ್ಯಗಳ ಸಾರ್ವಭೌಮ.) ಇವನಿಗೆ ಆರ್ಗನ್ ವಾದ್ಯ ಕಲಿಸಿದ ಗುರು ಕ್ರಿಶ್ಚಿಯನ್ ಗಾಟ್‍ಲೊಬ್ ನೀಫೆ.

	ಅಂದಿನ ಸಂಗೀತಗಾರರಿಗೆ ರಾಜರ ಇಲ್ಲವೇ ಧಾರ್ಮಿಕ ಸಂಸ್ಥೆಗಳ ಆಶ್ರಯ ಅನಿವಾರ್ಯವಾಗಿತ್ತು. ತಮ್ಮ ಯೋಗ್ಯತೆಯ ಬಂಡವಾಳವನ್ನೇ ಪಣವಿಟ್ಟು ನೇರ ರಸಿಕರನ್ನೇ ಆಶ್ರಯಿಸಿ ಸ್ವತಂತ್ರ ಜೀವನ ನಡೆಸುವುದು ಶಕ್ಯವಿರಲಿಲ್ಲ. ಈ ಅನ್ಯಾಶ್ರಿತ ಜೀವನದಲ್ಲಿ ಕಲಾವಿದನ ಘನತೆ ಗೌರವಗಳಿಗೆ ಭಂಗ ತಟ್ಟುತ್ತಿದ್ದುದು ಸಹಜವೇ. ಆತ್ಮಗೌರವವನ್ನು ಬದಿಗೊತ್ತಿ ಜೀವನಯಾಪನೆಯನ್ನೇ ಮುಂದಿಟ್ಟು ಬಾಳುತ್ತಿದ್ದ ಬಹುಸಂಖ್ಯಾತ ಸಂಗೀತಗಾರರಿಗೆ ಅಪವಾದವಾಗಿದ್ದವ ನೀಫೆ. ಆಶ್ರಯದಾತನ ನಿಕೃಷ್ಟ ಅಭಿರುಚಿಗೆ ತಾಳಹಾಕಬೇಕಾಗಿಬರುವ ಸೃಷ್ಟಿ ಶೀಲ ಕಲಾವಿದನ ಮನಃಸ್ಥಿತಿಯ ಬಗ್ಗೆ ಸಾತ್ತ್ವಿಕ ರೋಷ ಮತ್ತು ವಿಶೇಷ ಅನುಕಂಪ ಇದ್ದವನೀತ. ತನ್ನ ಈ ಆದರ್ಶವನ್ನು ಶಿಷ್ಯ ಬೇತೋವನ್ನನಲ್ಲಿ ಚೆನ್ನಾಗಿ ಬಿತ್ತಿದ. ಮೊದಲೇ ಈತನದು ಸ್ವತಂತ್ರ ಮನೋಧರ್ಮದ ಹಸನು ನೆಲ. ಅದರಲ್ಲಿ ನೀಫೆ ನೆಟ್ಟಬೀಜ ಮೊಳೆತು ಸೊಂಪಾಗಿ ಬೆಳೆಯಿತು. ಗರ್ವಿಷ್ಟ ಶ್ರೀಮಂತಿಕೆಗೆ ಎಂದೂ ಶಿರಬಾಗದ ಉಚ್ಛøಂಖಲತೆ. ನೀಫೆಯ ಗುರುತ್ವದಲ್ಲಿ ಬೇತೋವನ್ನನಿಗೆ ಅಭಿಜಾತ ಕೃತಿಕಾರರ ಹಾಗೂ ಲೆಸ್ಸಿಂಗ್ (ಗೋಟ್ ಹೋಲ್ಡ್ ಏಫ್ರೆಯ್ಮ್ ಲೆಸ್ಸಿಂಗ್, 1729-91, ಜರ್ಮನ್ ವಿಮರ್ಶಕ ಹಾಗೂ ನಾಟಕಕಾರ) ಶಿಲ್ಲರ್ (ಯೋಹನ್ ಕ್ರಿಸ್ಟಾಫ್ ಫ್ರೀಡ್‍ರಿಖ್ ಫಾನ್ ಶಿಲ್ಲರ್), 1759-1805, ಜರ್ಮನ್ ಕವಿ, ನಾಟಕಕಾರ ಮತ್ತು ಇತಿಹಾಸಕಾರ) ಮೊದಲಾದ ಸಮಕಾಲೀನ ಜರ್ಮನ್ ಕಲಾವಿದರ ಕೃತಿಗಳಿಗೆ ಪ್ರವೇಶ ದೊರೆಯಿತು. ಆಗ ಅಷ್ಟೇನೂ ಪ್ರಸಿದ್ಧಿಗೆ ಬಂದಿರದಿದ್ದ ಬಾಖ್ (ಯೋಹನ್ ಸೆಬಾಸ್ಟಿಯನ್ ಬಾಖ್, 1685-1750, ಜರ್ಮನಿಯ ಕೃತಿಕಾರ ಮತ್ತು ಆರ್ಗನ್ ವಾದ್ಯಕೋವಿದ) ಎಂಬಾತನ ಕೃತಿಗಳಲ್ಲಿ ಅಂತರ್ಗತವಾಗಿದ್ದ ಅಭಿಜಾತ ಸೌಂದರ್ಯವನ್ನು ನೀಫೆ ಶಿಷ್ಯನ ಮನಸ್ಸಿನಲ್ಲಿ ಚೆನ್ನಾಗಿ ಪಡಿಮೂಡಿಸಿದ. ಈತನ ಪ್ರಗತಿ ಅನ್ಯಾದೃಶವಾಗಿತ್ತು. ಅನೇಕ ಸಂದರ್ಭಗಳಲ್ಲಿ ಗುರುವಿನ ಗೈರುಹಾಜರಿಯಲ್ಲಿ ಆರ್ಗನ್ ವಾದಕನ ಪಾತ್ರವನ್ನು ಇವನೇ ಸಮರ್ಥವಾಗಿ ನಿರ್ವಹಿಸುವುದಿತ್ತು. 1783ರಲ್ಲಿ ಬೇತೋವನ್ನನಿಗೆ ನೀಫೆ ನೇತೃತ್ವದ ವಾದ್ಯಮೇಳದಲ್ಲಿ ಪ್ರಮುಖ ಸ್ಥಾನ ದೊರೆತದ್ದು ಯೋಗ್ಯತೆಗೆ ಸಂದ ಸಹಜ ಪುರಸ್ಕಾರ. 1784ರ ವೇಳೆಗೆ (ವಯಸ್ಸು ಹದಿನಾಲ್ಕು) ಇವನೊಬ್ಬ ವೃತ್ತಿ ಆರ್ಗನ್ ವಾದಕ ಮತ್ತು ವೃತ್ತಿ ಸಂಗೀತವಿದ ಎಂಬ ಖ್ಯಾತಿ ಗಳಿಸಿದ. 

	ಸಾಮಾಜಿಕವಾಗಿಯೂ ಆರ್ಥಿಕವಾಗಿಯೂ ನಿಮ್ನಸ್ತರದಿಂದ ಬಂದಿದ್ದ ಬೇತೋವನ್ನನಿಗೆ ಅವನ ಸಂಗೀತವ್ಯಕ್ತಿತ್ವದ ಕಾರಣವಾಗಿ ಕುಲೀನ ಸ್ತರಗಳಿಗೆ ನೇರ ಪ್ರವೇಶ ದೊರೆಯಿತು. ಆಗ ಇವನು ಜರ್ಮನ್ ಸಾಹಿತ್ಯ, ತತ್ತ್ವಶಾಸ್ತ್ರ ಷೇಕ್‍ಸ್ಪಿಯರ್ ಕೃತಿಗಳು ಮುಂತಾದ ಉದ್ದೀಪಕ ಹಾಗೂ ಉತ್ತಾರಕ ವಾಙ್ಮಯ ಪ್ರಕಾರಗಳನ್ನು ಆಳವಾಗಿ ಅಭ್ಯಸಿಸಿದ. ಇದರಿಂದ ಇವನ ಸಹಜ ಪ್ರತಿಭೆಗೆ ಟಿಸಿಲೊಡೆದು ವಿಕಾಸವಾಗಲು ವಿಸ್ತಾರ ಕ್ಷೇತ್ರ ದೊರೆಯಿತು. ಕುಲೀನರು ಇವನ ಸಂಗೀತವನ್ನು ಮೆಚ್ಚಿ ತಲೆದೂಗಿ ಪುರಸ್ಕರಿಸುತ್ತಿದ್ದಾಗಲೇ ಇವನ ವ್ಯಕ್ತಿತ್ವವನ್ನು ಕಡೆಗಣಿಸಿ ಮೂದಲಿಸಿ ತಿರಸ್ಕರಿಸುತ್ತಿದ್ದರು. ಈತ ಒರಟ. ಉಡುಪಿನಲ್ಲಿ ಓರಣವಿಲ್ಲ. ಮುಂಗೋಪಿ, ಅತಿ ಸ್ವಾಭಿಮಾನಿ, ಉನ್ನತ ಸ್ತರದ ಗೋಳೆ ಮಂದಿಯ ಕೃತಕ ವರ್ತನೆಗೆ ಎಂದೂ ಮಣಿಯದ ಸ್ವಚ್ಛಂದ ಜೀವ. ಮನೆಯಲ್ಲಿ ಅಶಾಂತಿ. ಪ್ರೇಮಪ್ರಕರಣದಲ್ಲಿ ವೈಫಲ್ಯ, ಸ್ವಂತಾರೋಗ್ಯ ಎಂದು ಉತ್ಕøಷ್ಟವಲ್ಲ. ಹೀಗೆ ಸಾಗಿತು ಕಲಾವಿದ ಬೇತೋವನ್ ಮತ್ತು ವ್ಯಕ್ತಿ ಬೇತೋವನ್ ನಡುವಿನ ಸಂಘರ್ಷ. 

	1787ರಲ್ಲಿ ಇವನು ಮೊದಲಬಾರಿಗೆ ವಿಯೆನ್ನಾಕ್ಕೆ ಹೋದ. ಅಲ್ಲಿ ಸಮಕಾಲೀನ ಐರೋಪ್ಯ ಸಂಗೀತವಿದರ ರಾಜನೆಂದು ಖ್ಯಾತನಾಗಿದ್ದ ಮೊಝಾರ್ಟನ ಭೇಟಿ ಆಯಿತು. ಮೂವತ್ತೈದರ ಈ ವಿದ್ವಾಂಸ ಅಂದು ಉತ್ಕರ್ಷೆಯ ಪರಾಕಾಷ್ಠೆ ಐದಿದ್ದ. ಹದಿನೇಳರ ಹರೆಯದ ಬೇತೋವನ್ನನ ಅಸಾಮಾನ್ಯ ಪ್ರತಿಭೆಯನ್ನು ಈತ ಒಡನೆ ಗುರುತಿಸಿ ಸ್ನೇಹಿತನಿಗೆ ಹೇಳಿದ `ಇವನ್ನೊಬ್ಬ ಗಮನಾರ್ಹ ವ್ಯಕ್ತಿ. ಒಂದಲ್ಲ ಒಂದು ದಿನ ಸಂಭಾಷಣೆಗೆ ವಸ್ತು ಒದಗಿಸುತ್ತಾನೆ ದಿಟ. ಬೇತೋವನನನ್ನು ಮೊಝಾರ್ಟ್ ತನ್ನ ಶಿಷ್ಯನಾಗಿ ಅಂಗೀಕರಿಸಲು ಸಮ್ಮತಿಸಿದ್ದ. ಆದರೆ ಈ ಯೋಗ ಕೈಗೂಡಲಿಲ್ಲ. ಬೆತೋವನ್ನನ ಪ್ರೀತಿಯ ತಾಯಿ ಮರಣೋನ್ಮಖಳಾಗಿದ್ದದರಿಂದ ಈತ ಬಾನ್‍ಗೆ ಧಾವಿಸುವುದು ಅನಿವಾರ್ಯವಾಯಿತು. ತಾಯಿ ಸತ್ತಳು. ಕುಡುಕ ತಂದೆಯ ಹಿಡಿತದಿಂದ ತಮ್ಮಂದಿರನ್ನು ರಕ್ಷಿಸಲು ಇದ್ದ ಉಪಾಯ ಒಂದೇ-ಅವರ ಪೋಷಕತ್ವದ ಹೊಣೆಯನ್ನು ನ್ಯಾಯಾಲಯದ ಮೂಲಕ ತಾನು ಪಡೆದುಕೊಳ್ಳುವುದು. ನ್ಯಾಯನಿಷ್ಠುರಿ ಬೇತೋವನ್ ಹೀಗೆಯೇ ಮಾಡಿದ. ಗೃಹ ತಾಪತ್ರಯಗಳ ಗುರುತ್ವಬಲ ಇವನನ್ನು ಬಾನ್ ನಗರಕ್ಕೆ ಬಂಧಿಸಿತು. 

	ಆದರೆ ಈ ಎಲ್ಲ ಕಷ್ಟ ಕೋಟಲೆಗಳನ್ನೂ ಮೀರಿ ಇವನ ಸೃಷ್ಟಿ ಶೀಲ ಸಾಮಥ್ರ್ಯ ಮತ್ತು ವಾದನ ಕೌಶಲ ವರ್ಧಿಸಿದವು. ಆಸ್ಟ್ರಿಯಾದ ಪ್ರಸಿದ್ಧ ವಾಗ್ಗೇಯಕಾರ ಫ್ರಾನ್‍ಝ ಜೋಸೆಫ್ ಹೇಯ್ಡನ್ (1932-1809) ಇದೇ ಸುಮಾರಿಗೆ ಬಾನ್ ನಗರಕ್ಕೆ ಬಂದಿದ್ದ (1790). ಆಗ ಇವನಿಗೆ ಬೇತೋವನ್ನನ ಸಂಗೀತ ಪ್ರತಿಭೆ ಗಮನಿಸುವ ಅವಕಾಶ ಲಭಿಸಿತು. ತನ್ನಲ್ಲಿಗೆ (ವಿಯೆನ್ನಾ) ಬೇತೋವನ್ ಬಂದುದಾದರೆ ಇವನಿಗೆ ಪ್ರೌಢಶಿಕ್ಷಣವೀಯುವುದು ಸಾಧ್ಯವಾದೀತೆಂದು ಆಶ್ವಾಸಿಸಿದ. ಇವನ ಶೈಲಿಯ ಅಸಾಮಾನ್ಯ ಕಸುವು ಮತ್ತು ಮೊಃಹಕತೆ ಈತನಿಂದ ಮಹತ್ತನ್ನು ನಿರೀಕ್ಷಿಸಬಹುದೆಂಬ ಭಾವನೆ ಹೇಯ್ಡನ್ನನಿಗೆ ಕೊಟ್ಟಿತು. 1792ರಲ್ಲಿ ಬೇತೋವನ್ ಬಾನ್‍ನಿಂದ ವಿಯೆನ್ನಾಕ್ಕೆ ನಿರ್ಗಮಿಸಿದಾಗ ಮುಂದೆಂದೂ ತಾನು ತನ್ನ ಪ್ರಿಯ ನಗರಕ್ಕೆ ಮರಳಲಾರೆ ಎಂಬ ಸಂದೇಹ ಕೂಡ ಅವನಲ್ಲಿ ಸುಳಿದಿರಲಾರದು. 1792 ಡಿಸೆಂಬರಿನಲ್ಲಿ ಯೋಹನ್ ದುರ್ಮರಣಕ್ಕೆ ಈಡಾಗಿ ಗತಿಸಿದಾಗ ಬೇತೋವನ್-ಬಾನ್ ಸಂಬಂಧ ಭಾವನಾಲೋಕದ ಛಾಯೆಯಾಗಿ ಮಾತ್ರ ಉಳಿಯಿತು. 

	ಹೇಯ್ಡನ್-ಬೇತೋವನ್ ಸಂಬಂಧ ಕಹಿ ಆಗದಿದ್ದರೂ ಮಧುರವಂತೂ ಆಗಲಿಲ್ಲ. ಹಿನ್ನೆಲೆ, ಶೈಲಿ, ದೃಷ್ಟಿಕೋನ ಒಂದೊಂದರಲ್ಲಿಯೂ ಇವರು ವಿಭಿನ್ನರು. ಎಲ್ಲ ಜನ್ಮಸಿದ್ಧ ಪ್ರತಿಭೆಗಳಂತೆ ಬೇತೋವನ್ ಕೂಡ ಸಂಗೀತದ ಪ್ರದರ್ಶನ ವಿಭಾಗದಲ್ಲಿ ಅದ್ಭುತ ಯಶಸ್ಸುಗಳಿಸಿದ್ದ. ಆದರೆ ಅದರ ಮೂಲಭೂತ ವಿಚಾರಗಳಲ್ಲಿ-ಇವು ಶಾಸ್ತ್ರಕ್ಕೆ ಸಂಬಂಧಿಸಿದವು-ಅವನು ಕಲಿಯಬೇಕಾದದ್ದು ಸಾಕಷ್ಟು ಇತ್ತು. ಈ ದೃತ್ಯ ಪ್ರತಿಭೆಯನ್ನು ಶಾಸ್ತ್ರದ ಸಂಕೋಲೆಯಲ್ಲಿ ಬಂಧಿಸಲು ಹೇಯ್ಡನ್ ಮಾಡಿದ ಪ್ರಯತ್ನ ವಿಫಲವಾಯಿತು. ಅಲ್ಲದೇ ಹೇಯ್ಡನ್ ನವಶೈಲಿಯ ಪ್ರವರ್ತಕನಾಗಿ ಸುಪ್ರಸಿದ್ಧನಾಗಿದ್ದ. ಖಾಸಗಿಯಾಗಿ ಶಿಷ್ಯನಿಗೆ ಪಾಠ ಹೇಳುವುದಕ್ಕಿಂತ ಸಾರ್ವಜನಿಕವಾಗಿ ರಸಿಕರ ಮುಂದೆ ವಾದ್ಯ ನುಡಿಸಿ ಕೃತಾರ್ಥತೆಗಳಿಸುವುದು ಅವನಿಗೆ ಅಧಿಕ ಪ್ರಿಯವಾಗಿತ್ತು. ಯಾರಿಗೂ ಶಿರಬಾಗದ ಆತ್ಮಪ್ರತ್ಯಯ ಬೇತೋವನ್ನನದು. ಹೀಗೆ ಇಬ್ಬರೂ ಸಮಾಂತರ ಹಳಿಗಳ ಮೇಲೆ ಸಾಗುತ್ತ ಎಲ್ಲಿಯೂ ಸಂಧಿಸಲಾರದೆ ಕಾಲ ಸಾಗಿತು.

	ವಿಯೆನ್ನಾದಲ್ಲಿ ಬೇತೋವನ್ನನ ಕಾರ್ಯಕ್ಷೇತ್ರ ಮೂರು ಕವಲುಗಳಾಗಿ ವಿಸ್ತರಿಸಿತು: ವಿದ್ವಾಂಸರ ಜೊತೆ ಆಧ್ಯಯನ, ಸಂಗೀತ ಪ್ರದರ್ಶನ, ಕೃತಿ ರಚನೆ, ಪಿಯಾನೊ ವಾದ್ಯಕ್ಕೆ ಇವನು ಹೊಸ ಆಯಾಮ ನೀಡಿ ಅದರ ಸಾಧ್ಯತೆಗಳನ್ನು ವಿಶಾಲವಾಗಿಸಿದ. ಆಶು ಸಂಗೀತ ರಚನೆ ಇವನಿಗೆ ಲೀಲಾವಿಹಾರ. ಈ ಕ್ಷೇತ್ರದಲ್ಲಿ ಇವನಿಗೆ ಹೆಗಲೆಣೆ ಆಗಬಲ್ಲ ಇನ್ನೊಬ್ಬ ಕಲಾವಿದನಿರಲಿಲ್ಲ. ವಾಸ್ತವವಾಗಿ ವಿಯೆನ್ನಾನಗರದ ಸಂಗೀತ ಕೇಂದ್ರವೇ ಇವನಾಗಿದ್ದ (1795). ಇದೇ ಸುಮಾರಿಗೆ ಇವನು ಸಂಗೀತಯಾತ್ರೆ ಹೊರಟು ಪ್ರೇಗ್, ಡ್ರೆಸ್ಡನ್, ಬರ್ಲಿನ್, ಲೈಪ್ಜಿಗ್ ಮತ್ತು ಬುದಾಪೆಸ್ಟ್ ನಗರಗಳಲ್ಲಿ ಕಚೇರಿ ನೀಡಿದ. ತನ್ನ ಕೃತಿಗಳ ಹಾಗೂ ಶೈಲಿಯ ಪ್ರಚಾರ ಮತ್ತು ಕೃತಿರಚನೆಗಾಗಿ ನೂತನ ವಸ್ತು ಮತ್ತು ಭಾವನೆಗಳ ಅನ್ವೇಷಣೆ ಉದ್ದೇಶ. ಅದೇ ಕೆಲವು ವರ್ಷಗಳ ಹಿಂದೆ ಮೊಝಾರ್ಟನ ಅನಂತರ ಯಾರು ಎಂಬ ಪ್ರಶ್ನೆಗೆ ಉತ್ತರ ಬೇತೋಮನ್ ಎಂದಿದ್ದರೆ ಇನ್ನೊಬ್ಬ ವಿಮರ್ಶಕನ ಪ್ರಕಾರ ನಮ್ಮ ಕಿವಿಯನ್ನೇನೋ ಈತ ಗೆದ್ದ ಆದರೆ ಹೃದಂiÀiವನ್ನಲ್ಲ ಎಂದಿತ್ತು. ಪ್ರಶ್ಯಾದ ದೊರೆ ಈತನ ಸಂಗೀತ ವೈಖರಿಗೆ ಮಾರುಹೋಗಿ ಸ್ವರ್ಣನಾಣ್ಯಭರಿತ ಚಿನ್ನದ ನಸ್ಯ ಕರಡಿಗೆಯನ್ನು ಉಡುಗೊರೆ ನೀಡಿ ಗೌರವಿಸಿದ. 

	ಸಂಗೀತಗಾರನಾಗಿ ಮತ್ತು ಕೃತಿಕಾರನಾಗಿ ವ್ಯಕ್ತಿ ಎಷ್ಟೇ ಸಮರ್ಥನಾದರೂ ಜೀವನಯಾಪನೆಗೆ ಆಗ ಆ ದಿನಗಳಲ್ಲಿ ಶ್ರೀಮಂತರ ಕೃಪಾಶ್ರಯ ಯಾಚಿಸುವುದು ಅನಿವಾರ್ಯವಗಿತ್ತು ಎಂದು ಹಿಂದೆ ಹೀಳಿದೆ. ಮೊಝರ್ಟನಂಥ ಮಹಿಮಾನ್ವಿತ ಕಲಾವಿದ ಕೂಡ ಇದಕ್ಕೆ ಅಪವಾದವಾಗಿರಲಿಲ್ಲ. ತನ್ನ ಬಾಳ ಸಂಜೆಯಲ್ಲಿ ಈತ ಸ್ವಪ್ರತಿಷ್ಠೆ ಸ್ಥಾಪಿಸಹೊರಟು ಶ್ರೀಮಂತರ ಕೃಪಾವಲಂಬನ ಶೂನ್ಯವಾಗಿ ಹೇಳ ಹೆಸರಿಲ್ಲದೆ ನಶಿಸಿ ಹೋದ ಘಟನೆ ಬೇತೋವನ್ನನ ಎದುರೇ ಇತ್ತು. ಆದರೆ ಈತನ ಮೂಲ ವಸ್ತು ಬೇರೆಯೇ, ಅಚ್ಚು ಕೂಡ. ಇವನ ಪ್ರತಿಭಾಜ್ಯೋತಿಯೂ ಖ್ಯಾತಿ ಪ್ರಭೆಯೂ ಉಜ್ಜ್ವಲವಾದಂತೆ ಒರಟುತನವೂ ಅನಾಗರಿಕ ನಡವಳಿಕೆಯೂ ಜಾಸ್ತಿ ಆದುವು. ಆದರೂ ವಿಯೆನ್ನಾದ ಗಣ್ಯ ಸಂಗೀತ ಪ್ರಿಯರು ಈ ಎಲ್ಲ ವೈಯಕ್ತಿಕ ವೈಪರೀತ್ಯಗಳನ್ನೂ ಉಪೇಕ್ಷಿಸುತ್ತ ಇವನ ಸಂಗೀತ ಕೇಳಲು ತವಕಿಸುತ್ತಿದ್ದುದು ಅವರ ಸೌಜನ್ಯಕ್ಕೆ ಹೇಗೋ ಹಾಗೆ ಇವನ ಕಲಾ ಉತ್ಕøಷ್ಟತೆಗೆ ನಿದರ್ಶನ. ಹೀಗೆ ಹದಿನೆಂಟನೆಯ ಶತಮಾನ ಮಾಸುತ್ತಿದ್ದಾಗ ಬೇತೋವನ್ನನ ಮುಂದೆ ಅತ್ಯುಜ್ಜ್ವಲ ಭವಿಷ್ಯ ಅನಾವರಣಗೊಳ್ಳುತ್ತಿದ್ದಂತೆ ತೋರುತ್ತಿತ್ತು. 

	1800ರ ವೇಳೆಗೆ ಬೇತೋವನ್ ಗತಿಸಿದ್ದರೆ ಅವನೊಬ್ಬ ಸಮಕಾಲೀನ ಮಹಾಕಲಾವಿದನೆಂಬ ಹೆಸರಿಗೆ ಭಾಜನನಾಗಿರುತ್ತಿದ್ದನೇ ವಿನಾ ಸಾರ್ವಕಾಲಿಕ ಮಹಾ ಪ್ರತಿಭಾವಂತನೆಂಬ ಖ್ಯಾತಿಗೆ ಅಲ್ಲ. ಅವನ ಸಾಧನೆ ಸಿದ್ಧಿಗಳೇನಿದ್ದರೂ ಮರಣದೊಂದಿಗೆ ಮುಸುಳಿಹೋಗಿರುತ್ತಿದ್ದುವು. ಅವನು ಬದುಕಿ ಉಳಿದಿದ್ದ ಮುಂದಿನ ಇಪ್ಪತ್ತೇಳು ವರ್ಷ ಅತ್ಯಂತ ಫಲವಂತ ಅವಧಿ. ಆಗ ಅವನ ಸೃಷ್ಟಿಶೀಲ ಸಾಮಥ್ರ್ಯ ಗರಿಗೆದರಿ ವಿಶಾಲಾಕಾಶದಲ್ಲಿ ಹಾರಿ ಚಿರಂತನ ಮೌಲ್ಯದ ಮಹಾ ಕೃತಿಗಳನ್ನು ರಚಿಸಿತು. ಅದೇ ಅವಧಿಯಲ್ಲಿ ಅವನ ಆರೋಗ್ಯ ಕ್ರಮೇಣ ಹದಗೆಡುತ್ತ ಹೋಗಿ ದೈಹಿಕವೇದನೆ ಮತ್ತು ಮಾನಸಿಕ ಮ್ಲಾನತೆ ಅಸಹನೀಯವಾದುವು. ಒಂಟಿಬಾಳ್ವೆ, ಕಿವುಡುತನ ಜಾಸ್ತಿ ಆಗತ್ತ ಹೋಗಿ ಕೊನೆಯ ಹತ್ತು ವರ್ಷಗಳಲ್ಲಿ ಪೂರ್ಣ ಕಿವುಡನಾದ. ಹೀಗಾಗಿ ಸಾರ್ವಜನಿಕ ವೇದಿಕೆಗಳಲ್ಲಿ ಕಾಣಿಸಿಕೊಳ್ಳುವುದು ವಿರಳವಾಗಿ ಆರ್ಥಿಕ ಅಭದ್ರತೆ ನಿತ್ಯಸಂಗಾತಿಯಾಯಿತು. ನೆಮ್ಮದಿ ಏನಿದ್ದರೂ ಕಲೆಯಿಂದ ಮಾತ್ರ. ನಿಸರ್ಗದ ರಾಗವೈವಿಧ್ಯವನ್ನು ಎಳವೆಯಲ್ಲಿಯೇ ಕೇಳಿ ಸಂಗೀತ ಸ್ವರಗಳ ವಿವಿಧ ಛಾಯೆ ಠಾಯಿ ಪಲುಕು ಬಲುಕುಗಳನ್ನು ಚೆನ್ನಾಗಿ ರೂಢಿಸಿಕೊಂಡಿದ್ದ ಬೇತೋವನ್ ತನ್ನ ಅಂತರಿಕ ಶ್ರವಣೇಂದ್ರಿಯಗಳು ತೋರಿದ ಹಾದಿಯಲ್ಲಿ ಕೃತಿರಚನೆ ಮಾಡುತ್ತ ಸಂಗೀತ ಸುಖಿಯಾಗುತ್ತಿದ್ದ. ವ್ಯಾಧಿ ಉಲ್ಬಣಿಸಿ 1827 ಮಾರ್ಚಿ 14 ರಂದು ಮರಣಹೊಂದಿದ. 

	ಈತ ಯಾವುದೇ ನೂತನ ಸಂಗೀತ ರೂಪಕ ಅಥವಾ ಪ್ರಕಾರದ ಸೃಷ್ಟಿಕರ್ತನಲ್ಲ. ಇವನು ಪ್ರವರ್ತಿಸಿದ ವಾದ್ಯಮೇಳಕೃತಿಯ (ಸಿಂಘನಿ-ಪಾಶ್ಚಾತ್ಯ ವಾದ್ಯಮೇಳದಲ್ಲಿ ನುಡಿಸಲು ರಚಿಸಿರುವ ಸಂಗೀತ ಕೃತಿ. ಸಾಧಾರಣವಾಗಿ ನಾಲ್ಕು ಸಂಚಾರಗಳಲ್ಲಿರುವುದು) ರೂಪವನ್ನು ಮೊದಲು ಸಿದ್ಧಪಡಿಸಿದವ ಹೇಯ್ಡನ್. ಈ ಲಭ್ಯ ರೂಪಕ್ಕೆ ಜೀವ ತುಂಬಿ ಉತ್ತಾರಕ ಸ್ಥಿತಿಗೇರಿಸಿದ್ದ ಬೇತೋವನ್ನನ ಪ್ರತಿಭೆ. ಬೇತೋವನ್ನನ ನವವಾದ್ಯಮೇಳಕೃತಿಗಳೆಂದೇ ಇವು ಪ್ರಸಿದ್ಧವಾಗಿವೆ. ಪಿಯಾನೊ ಸೊನಾಟಾಗಳಲ್ಲಿ ಮತ್ತು ತಂತ್ರೀ ಚತುಷ್ಕಗಳಲ್ಲಿ (ಸ್ಪ್ರಿಂಗ್ ಕ್ವಾರ್ಟೆಟ್-ಉದಾಹರಣೆಗೆ ಎರಡು ಪಟೀಲು, ತಲಾ ಒಂದು ವಯೋಲಾ ಮತ್ತು ಚೆಲ್ಲೊ ಎಂಬ ಚತುಸ್ತ್ರಂತೀ ವಾದ್ಯಗಳಿಗಾಗಿ ಸಾಧಾರಣ ಮೂರು ಅಥವಾ ನಾಲ್ಕು ಸಂಚಾರಗಳಲ್ಲಿ ರಚಿಸಿರುವ ಸಂಗೀತ ಕೃತಿ) ಇವನು ಪರಮೋನ್ನತ ಸಿದ್ಧಿಪಡೆದಿದ್ದಾನೆ. ಪಾಶ್ಚಾತ್ಯ ಸಂಗೀತಕ್ಕೆ ಹೊಸತಿರುವು ಕೊಟ್ಟ ಯುಗಪುರಷ. ಕಲಾವಿದನ ಸ್ವತಂತ್ರ ಆಸ್ತಿತ್ವವನ್ನು ಸ್ಥಾಪಿಸಿದ ಆತ್ಮಪ್ರತ್ಯಯವಂತ. ಜಗತ್ಪ್ರತಿಭೆ ಎಲ್ಲಿಯೇ ಇದ್ದರೂ ಎಂಥ ಪ್ರತಿಕೂಲ ಸನ್ನಿವೇಶ ಎದುರಿಸಬೇಕಾಗಿ ಬಂದರೂ ಅಂತರಿಕ ತ್ರಾಣದ ಕಾರಣವಾಗಿ ಇತಿಹಾಸದ ಪುಟಗಳಲ್ಲಿ ತನ್ನ ಆಸ್ತಿತ್ವದ ಶಾಶ್ವತ ಮುದ್ರೆ ಒತ್ತಿಯೇ ಒತ್ತುತ್ತದೆ ಎನ್ನುವುದಕ್ಕೆ ಸಾಕ್ಷಿ ಇವನ ಬದುಕು ಮತ್ತು ಕೃತಿ.				 
 *
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ